ತಾಜಾ ಸುದ್ದಿ
ನ್ಯಾಯಾಲಯದ ವಿಚಾರಣೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆ
ರೇಣುಕಾಸ್ವಾಮಿ ಕೊಲೆ ಪ್ರಕರಣ: ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ನಟ ದರ್ಶನ್ಗೆ ಮೂಲ ಸೌಲಭ್ಯ ಕಲ್ಪಿಸಲಾಗುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ರಾಜ್ಯ ಸರ್ಕಾರ ಒಂದು ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿದೆ.
ಮಧ್ಯಂತರ ಜಾಮೀನು ಕೋರಿ ನಟ ದರ್ಶನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜೆ ಬಿ ಪರ್διವಾಲಾ ಮತ್ತು ವಿಜಯ್ ಬಿಷ್ಣೋಯ್ ಅವರ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಿತು.
ದರ್ಶನ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು “262 ಸಾಕ್ಷಿಗಳ ವಿಚಾರಣೆ ಪೈಕಿ 10 ಸಾಕ್ಷಿಗಳ ವಿಚಾರಣೆಯಾಗಿದೆ. ದರ್ಶನ್ ಅವರು ಸುಮಾರು ಒಂದು ವರ್ಷದಿಂದ ಜೈಲಿನಲ್ಲಿದ್ದಾರೆ. ದರ್ಶನ್ಗೆ ಐಷಾರಾಮಿ ಸೌಲಭ್ಯ ಕಲ್ಪಿಸಬಾರದು ಎಂದು ಇದೇ ನ್ಯಾಯಾಲಯ ಆದೇಶಿಸಿದೆ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಈ ನಿರ್ದೇಶದಿಂದ ದರ್ಶನ್ಗೆ ಮೂಲಸೌಲಭ್ಯವೂ ಸಿಗುತ್ತಿಲ್ಲ” ಎಂದರು.
“ಸಾಮಾನ್ಯ ಆರೋಪಿಗೆ ದೊರಕುವ ಸೌಲಭ್ಯವೂ ದರ್ಶನ್ಗೆ ಸಿಗುತ್ತಿಲ್ಲ. ದರ್ಶನ್ರನ್ನು ಕ್ವಾರಂಟೈನ್ ಸೆಲ್ನಲ್ಲಿ ಇರಿಸಲಾಗಿದೆ. ಅಲ್ಲಿ ಬೆಳಕೂ ಇಲ್ಲ, ಊಟವನ್ನೂ ತರಿಸಿಕೊಳ್ಳಲಾಗುತ್ತಿಲ್ಲ. ಈ ಸಂಬಂಧ ವಿಚಾರಣಾ ನ್ಯಾಯಾಲಯ ಮನವಿ ಸಲ್ಲಿಸಲಾಗಿತ್ತು. ಆ ನ್ಯಾಯಾಲಯವು ಸುಪ್ರೀಂ ಕೋರ್ಟ್ ಆದೇಶದಿಂದ ನಿಮಗೆ ಕೊಡಲಾಗುತ್ತಿಲ್ಲ ಎನ್ನುತ್ತಿದೆ” ಎಂದರು.
ಇದನ್ನು ಆಲಿಸಿದ ಪೀಠವು “ವಿಚಾರಣಾ ಕೈದಿ ಅರ್ಹವಾಗಿ ಪಡೆಯಬಹುದಾದ ಮೂಲ ಸೌಲಭ್ಯವನ್ನು ದರ್ಶನ್ಗೆ ನೀಡಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ರಾಜ್ಯ ಸರ್ಕಾರ ವರದಿ ಸಲ್ಲಿಸಬೇಕು” ಎಂದು ಆದೇಶಿಸಿದ ನ್ಯಾಯಾಲಯ.
“ಎಷ್ಟು ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಎಷ್ಟು ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ವಿಚಾರಣೆ ನಡೆಸಲು ಪ್ರಸ್ತಾಪಸಿತ್ತು? ಇದರಿಂದ ವಿಚಾರಣೆ ಮುಗಿಯಲು ಎಷ್ಟು ಸಮಯಬೇಕಾಗುತ್ತದೆ ಎಂಬುದು ತಿಳಿಯಲಿದೆ. ಹೀಗಾಗಿ, ಈ ಸಂಬಂಧ ವಿಚಾರಣಾಧೀನ ನ್ಯಾಯಾಲಯದಿಂದ ರಿಜಿಸ್ಟ್ರಿ ವರದಿ ಒಂದು ವಾರದಲ್ಲಿ ವರದಿ ತರಿಸಿಕೊಳ್ಳಬೇಕು” ಎಂದು ಆದೇಶಿಸಿತು. ಅಲ್ಲದೇ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.
ಪ್ರಕರಣದಲ್ಲಿ ಒಟ್ಟು 262 ಸಾಕ್ಷಿಗಳಿದ್ದು , ಈ ಪೈಕಿ ಇದುವರೆಗೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ಹೀಗಾಗಿ, ವಿಚಾರಣೆಗೆ ಸಾಕಷ್ಟು ಸಮಯ ಹಿಡಿಯಲಿದೆ. ಬಹುಕಾಲ ಜೈಲಿನಲ್ಲಿ ಉಳಿಯುವುದರಿಂದ ವೃತ್ತಿಗೆ ಹೊಡೆತ ಬೀಳಲಿದ್ದು, ವ್ಯವಹಾರ ಮತ್ತು ವೃತ್ತಿ ಕೈಗೊಳ್ಳುವ ಹಕ್ಕಿಗೆ ಹಾನಿಯಾಗಲಿದೆ. ಬಹುಮುಖ್ಯವಾಗಿ ಸುದ್ದಿವಾಹಿನಿಗಳು ಪ್ರಕರಣದ ವಿಚಾರಣೆಯ ಕುರಿತು ಸುದ್ದಿ ಬಿತ್ತರಿಸುತ್ತಿರುವ ರೀತಿಯು ನ್ಯಾಯಯುತ ವಿಚಾರಣೆ ಹೊಂದುವ ಹಕ್ಕಿಗೆ ಭಾರಿ ಹಾನಿ ಉಂಟು ಮಾಡಿದೆ. ಈ ಎಲ್ಲಾ ಕಾರಣಗಳಿಗಾಗಿ ಜಾಮೀನು ನೀಡಬೇಕು ಎಂಬುದು ದರ್ಶನ್ ಮನವಿಯಾಗಿದೆ.
2024ರ ಜೂನ್ 9ರಂದು ಬೆಂಗಳೂರಿನ ರಾಜಕಾಲುವೆಯಲ್ಲಿ ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗಿತ್ತು. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇಲೆ ನಟ ದರ್ಶನ್ ಅವರು ಇತರರ ಜೊತೆ ಸೇರಿ ಪಟ್ಟಣಗೆರೆಯ ಶೆಡ್ಗೆ ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸಿದ್ದರು. ಆನಂತರ ಮೃತದೇಹವನ್ನು ರಾಜಕಾಲುವೆಗೆ ಎಸೆದಿದ್ದರು ಎಂದು ಆರೋಪಿಸಲಾಗಿದೆ.
2024ರ ಅಕ್ಟೋಬರ್ 30ರಂದು ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಡಿಸೆಂಬರ್ 13ರಂದು ಜಾಮೀನನ್ನು ಕಾಯಂಗೊಳಿಸಿತ್ತು. 2025ರ ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ದರ್ಶನ್ ಸೇರಿದಂತೆ ಐವರಿಗೆ ಮಂಜೂರಾಗಿದ್ದ ಜಾಮೀನು ರದ್ದುಪಡಿಸಿತ್ತು.
ಸುದ್ದಿವಾಹಿನಿಗಳ ಅತಿರೇಕದ ವರದಿಗಾರಿಕೆ ನಿರ್ಬಂಧಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ಕರ್ನಾಟಕ ಹೈಕೋರ್ಟ್ ಭಾಗಶಃ ಪುರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ನ್ಯಾಯದಾನ ಪ್ರಕ್ರಿಯೆಯಲ್ಲಿ ಮಾನವೀಯತೆ, ಸಂವಿಧಾನ ಮೌಲ್ಯಗಳ ಜೊತೆಗೆ ಸಂವೇದನೆ ಅತ್ಯಗತ್ಯ: ಸುಪ್ರೀಂಕೋರ್ಟ್ ಸಿಜೆ ಸೂರ್ಯಕಾಂತ್
ಬೆಂಗಳೂರು : ನ್ಯಾಯದಾನ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರ ಪಾತ್ರ ಕೇವಲ ಕಾನೂನು ಜ್ಞಾನಕ್ಕೆ ಮಾತ್ರ ನೀಮಿತವಾಗಿದೆ. ಮಾನವೀಯತೆ, ಸಂವೇದನೆ ಮತ್ತು ಜವಾಬ್ದಾರಿಯನ್ನು ಒಳಗೊಂಡಿರಬೇಕು ಎಂದು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ತಿಳಿಸಿದರು.
ಬೆಂಗಳೂರಿನ ಜಿಕೆವಿಕೆಯ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ನಡೆದ "ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನ್ಯಾಯಾಂಗವನ್ನು ಮರುರೂಪಿಸುವುದು" ವಿಷಯದ ಕುರಿತ ನ್ಯಾಯಾಂಗ ಅಧಿಕಾರಿಗಳ 22ನೇ ದ್ವೈವಾರ್ಷಿಕ ರಾಜಮಟ್ಟದ ಸಮ್ಮೇಳನದಲ್ಲಿ ಮಾತನಾಡಿದ ಅವರು, ನ್ಯಾಯಾಲಯಕ್ಕೆ ಬರುವ ಪ್ರತಿಯೊಂದ ಪ್ರಕರಣವೂ ಮಾನವೀಯ ಅಂಶಗಳನ್ನು ಹೊಂದಿದ್ದು, ನ್ಯಾಯನಿರ್ಣಯವು ಕೇವಲ ಕಾನೂನು ಅನ್ವಯಿಸುವ ಕಾರ್ಯಮಾತ್ರವಲ್ಲದೆ. ಬದುಕಿನ ನೈಜತೆಗಳೊಂದಿಗೆ ಸಂವಾದವಾಗಿರಬೇಕು ಎಂದು ನ್ಯಾಯಾಂಗ ಅಧಿಕಾರಿಗಳಿಗೆ ಸಲಹೆ ನೀಡಿದರು.
ಸಾಮಾನ್ಯ ನಾಗರಿಕರಿಗೆ ನ್ಯಾಯಾಂಗ ವ್ಯವಸ್ಥೆ ಎಂದರೆ ವಿಚಾರಣಾ ನ್ಯಾಯಾಲಯಗಳಾಗಿರಲಿದ್ದು, ಈ ನ್ಯಾಯಾಲಯಗಳಲ್ಲಿ ಸಂವಿಧಾನದ ಮೌಲ್ಯಗಳು ಜೀವಂತವಾಗಿದ್ದು ನ್ಯಾಯಾಂಗದ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ತಿಳಿಸಿದರು.
ಅಲ್ಲದೆ, ನ್ಯಾಯಾಂಗದ ಭವಿಷ್ಯವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮಾತ್ರವಲ್ಲ, ತನ್ನ ಮೂಲಭೂತ ಮೌಲ್ಯಗಳನ್ನು ಕಾಪಾಡಿಕೊಳ್ಳುವ ಸಾಮರ್ಥ್ಯದಲ್ಲಿದ್ದು, ನ್ಯಾಯವು ನ್ಯಾಯಸಮ್ಮತ, ಸುಲಭ ಮತ್ತು ಮಾನವೀಯವಾಗಿರಬೇಕೆಂಬುದು ಅಂತಿಮ ಗುರಿಯಾಗಿರಬೇಕು ಎಂದು ತಿಳಿಸಿದರು.
ಎಐಗೆ ಮಾನವೀಯ ತೀರ್ಮಾನ ಶಕ್ತಿ ಇಲ್ಲ : ಕೃತಕ ಬುದ್ಧಿಮತ್ತೆಯ ಬಳಕೆ ನ್ಯಾಯಾಂಗದಲ್ಲಿ ಕಾರ್ಯ ಕ್ಷಮತೆಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಅದಕ್ಕೆ ಮಾನವೀಯ ತೀರ್ಮಾನಶಕ್ತಿ, ನೈತಿಕತೆ ಮತ್ತು ಸಾಮಾಜಿಕ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿರುವುದಿಲ್ಲ. ಆದ್ದರಿಂದ, ಅದನ್ನು ಅತಿಯಾಗಿ ಅವಲಂಬಿಸುವುದು ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಗುಣಮಟ್ಟಕ್ಕೆ ಹಾನಿಯಾಗಬಹುದು. ಹೀಗಾಗಿ ಅದರ ಮಿತಿಗಳನ್ನು ಗಮನದಲ್ಲಿಟ್ಟು ಬಳಕೆ ಮಾಡಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಎಐ ಬಳಕೆ ಮಾಡಿ ತಪ್ಪು ಮಾಹಿತಿಯನ್ನೊಳಗೊಂಡ ಅರ್ಜಿಗಳು, ಕೃತಕ ಉಲ್ಲೇಖಗಳು ಮತ್ತು ಅಸಂಬದ್ಧ ವಾದಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇವು ನ್ಯಾಯಾಂಗದ ಸಮಯವನ್ನು ವ್ಯರ್ಥಗೊಳಿಸುವುದಲ್ಲದೆ, ನಿಜವಾದ ಪ್ರಕರಣಗಳ ವಿಚಾರಣೆಗೆ ಅಡ್ಡಿಯಾಗುತ್ತವೆ. ಹೀಗಾಗಿ, ಕೃತಕ ಬುದ್ಧಿಮತ್ತೆಯನ್ನು ಉಪಕರಣವಾಗಿ ಮಾತ್ರ ಬಳಸಬೇಕು, ನ್ಯಾಯಾಂಗಕ್ಕೆ ಪರ್ಯಾಯವಾಗಿ ಅಲ್ಲ. ನ್ಯಾಯನಿರ್ಣಯವು ಮಾನವೀಯ ತರ್ಕ, ಅನುಭವ ಮತ್ತು ಸಂವಿಧಾನ ಮೌಲ್ಯಗಳ ಆಧಾರದಲ್ಲಿಯೇ ನಡೆಯಬೇಕು ಎಂದು ಎಂದು ಅವರು ವಿವರಿಸಿದರು.
ಅಲ್ಲದೆ, ಎಐ ಬಳಕೆಯ ಕುರಿತು ಭಯಪಡುವ ಅಗತ್ಯವಿಲ್ಲ. ಆದರೆ ಅದನ್ನು ಜಾಗರೂಕತೆಯಿಂದ, ವಿಚಾರಪೂರ್ಣವಾಗಿ ಬಳಸಬೇಕು. ನ್ಯಾಯಾಧೀಶರ ಸ್ವತಂತ್ರ ಚಿಂತನೆ ಯಾವಾಗಲೂ ಮೇಲುಗೈ ಸಾಧಿಸಬೇಕು ಎಂದು ಅವರು ಇದೇ ವೇಳೆ ಸಲಹೆ ನೀಡಿದರು.
ರಾಜ್ಯ ಮಟ್ಟದ ಸಮ್ಮೇಳನ