ತಾಜಾ ಸುದ್ದಿ
ನ್ಯಾಯಾಲಯದ ಆದೇಶ
ಧುರಂಧರ್–2 ಚಿತ್ರದ ಕಥೆ ಕಳವು ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಜಾ
ದುರಂಧರ್–2 ಚಿತ್ರಕಥೆ ಕಳವು ಆರೋಪ: ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು: ‘ಧುರಂಧರ್–2 ಚಿತ್ರದ ಮೂಲಕಥೆ ನನ್ನದು. ಈ ಕಥೆಯನ್ನು ಕಳವು ಮಾಡಲಾಗಿದೆ. ಆದ್ದರಿಂದ, ಚಿತ್ರಕ್ಕೆ ನೀಡಲಾಗಿರುವ ಪ್ರಮಾಣಪತ್ರವನ್ನು ರದ್ದುಗೊಳಿಸಲು; ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್ಸಿ) ನಿರ್ದೇಶಿಸಬೇಕು’ ಎಂದು ಕೋರಲಾಗಿದ್ದ ಅರ್ಜಿಯೊಂದನ್ನು ಹೈಕೋರ್ಟ್ ವಜಾಗೊಳಿಸಿದೆ.
ನಗರದ ಕಥೆಗಾರ, ನಿರ್ದೇಶಕ, ನಿರ್ಮಾಪಕ ಆರ್.ಎಸ್.ಸಂತೋಷ ಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಅರ್ಜಿದಾರರ ದೂರು ಕೃತಿಚೌರ್ಯ ವಿವಾದಕ್ಕೆ ಸಂಬಂಧಿಸಿದೆ. ಇದೊಂದು ಖಾಸಗಿ ಹಕ್ಕಿಗೆ ಸಂಬಂಧಿಸಿದ ಪ್ರಕರಣ. ಅಂತೆಯೇ, ಚಲನಚಿತ್ರವೊಂದಕ್ಕೆ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ಕಥೆ ಕಳವು ಆರೋಪಗಳನ್ನು ಪರಿಶೀಲಿಸುವ ಅಧಿಕಾರ; ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್ಸಿ) ಇಲ್ಲ. ಇದು ಸಂಪೂರ್ಣ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿರುವ ಕಾರಣ; ಅರ್ಜಿದಾರರು ಕೃತಿಚೌರ್ಯದ ಆರೋಪದಡಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಸೂಕ್ತ ಪರಿಹಾರ ಪಡೆದುಕೊಳ್ಳಬಹುದು’ ಎಂದು scrap ಮಾಡದೆ ಸ್ಪಷ್ಟಪಡಿಸಿದೆ.
ಅರ್ಜಿಯಲ್ಲಿ ಏನಿತ್ತು?: ‘ದೇಶಭಕ್ತಿ ಪ್ರೇರಿತ, ಭಯೋತ್ಪಾದನೆ ವಿರುದ್ಧ ಹೋರಾಡುವ ಅಂಶಗಳ ಆಧಾರದಲ್ಲಿ ಹೆಣೆಯಲಾಗಿದ್ದ ‘ಡಿ ಸಾಹೇಬ್’ ಚಿತ್ರದ ಹಸ್ತಪ್ರತಿಯನ್ನು ನಾನು 2023ರಲ್ಲೇ ತಯಾರಿಸಿದ್ದೆ. ಇದರ ಕಥೆ, ಚಿತ್ರಕಥೆ, ಸಂಕ್ಷಿಪ್ತ ವರ್ಣನೆಗಳನ್ನು ಅಭಿವೃದ್ಧಿಪಡಿಸಿ; ಚಿತ್ರಕಥೆ ಲೇಖಕರ ಸಂಘವೂ (ಎಸ್ಡಬ್ಲ್ಯುಎ) ಸೇರಿದಂತೆ ಇತರೆ ಸಕ್ಷಮ ಪ್ರಾಧಿಕಾರಗಳಲ್ಲಿ ನೋಂದಣಿ ಮಾಡಿಸಿದ್ದೆ. 2023ರಲ್ಲಿ ಇದನ್ನು ನಾನು ಸಿನಿರಂಗದ ನಿರ್ಮಾಪಕರು ಹಾಗೂ ಇತರರಲ್ಲಿಯೂ ಹಂಚಿಕೊಂಡಿದ್ದೆ. ಆದರೆ, ಇದನ್ನೇ ಕಳವು ಮಾಡಲಾಗಿದ್ದು, ಕಾನೂನು ಬಾಹಿರವಾಗಿ ದುರಂಧರ್–2 ಚಿತ್ರದಲ್ಲಿ ಅಳವಡಿಸಿ ಚಿತ್ರ ನಿರ್ಮಿಸಿ ಬಹುಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಆದ್ದರಿಂದ, ಈ ಚಿತ್ರಕ್ಕೆ ನೀಡಲಾಗಿರುವ ಪ್ರಮಾಣಪತ್ರ ರದ್ದುಗೊಳಿಸಲು ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.